Monday 10 November 2014

ಮೌಲಾನಾ ಅಬ್ದುಲ್ ಕಲಾಂ ಅಜಾದ್

ಮೌಲಾನ ಅಬ್ದುಲ್ ಕಲಾಂ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರಾಗಿ, ಭಾರತ ಸರ್ಕಾರದ ಶಿಕ್ಷಣ ಮಂತ್ರಿಗಳಾಗಿ ಪ್ರಸಿದ್ಧರೆನಿಸಿದ್ದಾರೆ. ಅವರ ಜನ್ಮದಿನವಾದ ನವೆಂಬರ್ 11ದಿನಾಂಕವನ್ನು ಭಾರತದ ರಾಷ್ಟ್ರೀಯ ಶಿಕ್ಷಣ ದಿನವನ್ನಾಗಿ ಆಚರಿಸಲಾಗುತ್ತಿದೆ.

ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹಾತ್ಮಗಾಂಧಿಯವರ ಜೊತೆಗಾರರಾಗಿದ್ದ ಪ್ರಮುಖರಲ್ಲಿ ಮೌಲಾನಾ ಅಬ್ಬುಲ್ ಕಲಾಂ ಒಬ್ಬರು. ಅವರು ಜನಿಸಿದ್ದು ನವೆಂಬರ್ 11, 1888ರಲ್ಲಿ.ಉರ್ದು ವಿದ್ವಾಂಸರಾಗಿದ್ದ ಅವರು ತಮ್ಮ ಬರವಣಿಗೆಗಾಗಿ ‘ಆಜಾದ್’ ಎಂಬ ನಾಮಾಂಕಿತವನ್ನು ಬಳಸುತ್ತಿದ್ದರು. ಹೀಗಾಗಿ ಅವರು ಮೌಲಾನಾ ಆಜಾದ್ ಎಂದೇ ಪ್ರಸಿದ್ದರು.

ತ್ರಕರ್ತರಾಗಿ ಬ್ರಿಟಿಷ್ ಆಡಳಿತ ವಿರುದ್ಧ ಬರೆಯುತ್ತಿದ್ದ ಲೇಖನಗಳಿಂದ ಮೌಲಾನಾ ಆಜಾದರು ಪ್ರಸಿದ್ಧಿ ಪಡೆದಿದ್ದರು. ಖಿಲಾಫತ್ ಚಳುವಳಿಯ ನೇತೃತ್ವ ವಹಿಸಿದ್ದ ಆಜಾದರು ಮಹಾತ್ಮ ಗಾಂಧೀಜಿಯವರ ನಿಕಟವರ್ತಿಗಳಾದರು. ಮಹಾತ್ಮರು ಆಯೋಜಿಸಿದ್ದ ಅಸಹಕಾರ ಚಳುವಳಿಯಲ್ಲಿ ಅತ್ಯಂತ ಕ್ರಿಯಾಶೀಲ ಯುವಕ ಎಂದು ಹೆಸರಾದರು. ಗಾಂಧೀಜಿಯವರ ‘ಸ್ವದೇಶಿ’, ‘ಸ್ವರಾಜ್’ ಚಿಂತನೆಗಳಿಗೆ ಮಾರು ಹೋಗಿ ಅವರ ಜೊತೆ ನಿರಂತರವಾಗಿದ್ದ ಅಬ್ದುಲ್ ಕಲಾಂ 1923ರ ವರ್ಷದಲ್ಲಿ ತಮ್ಮ 35ನೇ ವಯಸ್ಸಿನಲ್ಲಿಯೇ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಅತ್ಯಂತ ಕಿರು ವಯಸ್ಸಿನವರಾಗಿದ್ದರು.
1931ರ ವರ್ಷದಲ್ಲಿ ‘ದರ್ಶನ ಸತ್ಯಾಗ್ರಹ’ದ ಪ್ರಮುಖ ಆಯೋಜಕರಾಗಿದ್ದ ಮೌಲಾನ ಹಲವಾರು ಕಠಿಣ ಸೆರೆವಾಸಗಳನ್ನು ಕಂಡರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಮೂರು ವರ್ಷಗಳ ಕಾಲ ಸತತವಾಗಿ ಸೆರೆಯಲ್ಲಿಯೇ ಇದ್ದರು. ಸ್ವಾತಂತ್ರ್ಯದ ಸಮಯದಲ್ಲಿ ದೇಶದ ವಿಭಜನೆಯ ಕೂಗನ್ನು ಬೆಂಬಲಿಸದಿದ್ದ ಅವರು ಭಾರತದ ಪರವಾಗಿಯೇ ಇದ್ದರು. ಸ್ವತಂತ್ರ ಭಾರತದಲ್ಲಿ ಶಿಕ್ಷಣ ಸಚಿವರಾಗಿದ್ದ ಅಬ್ದುಲ್ ಕಲಾಂ ಅವರು ಹುಟ್ಟಿದ ಈ ದಿನವನ್ನು ರಾಷ್ಟ್ರೀಯ ಶಿಕ್ಷಣ ದಿನ ಎಂದು ಆಚರಣೆಗೆ ತರಲಾಗಿದೆ.ಮೌಲಾನಾ ಅಬ್ದುಲ್ ಕಲಾಂ ಅವರು ಫೆಬ್ರವರಿ 22, 1958ರಲ್ಲಿ  ನಿಧನರಾದರು.

No comments:

Post a Comment