Thursday 9 October 2014

ಕಾರ೦ತರಿಗೊ೦ದು ನಮನ..ಜನ್ಮದಿನ   10-10-1907
ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ 1907 ಅಕ್ಟೋಬರ್ 1೦ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ಅರ್ಥಪೂರ್ಣ ಬದುಕು ಕಳೆದ ಸಾಹಿತ್ಯ ದಿಗ್ಗಜ ಡಾ. ಶಿವರಾಮಕಾರಂತರು ೧೯೯೭, ಡಿಸೆಂಬರ್ ೦೯ ರಂದು ನಿಧನ ಹೊಂದಿದರು. ತಮ್ಮ ಜೀವಿತಾವಧಿಯಲ್ಲಿ ಸುಮಾರು ೪೨೭ ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು ೪೭. ತಮ್ಮ ೯೬ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು. ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ದೇಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ  ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ. ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (೧೯೩೧) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು. ಪರಿಸರ ಹೋರಾಟ: ಕಾರಂತರ ಕಾದಂಬರಿಗಳುದ್ದಕ್ಕೂ ಪರಿಸರದ ಚಿತ್ರಣ ಗಾಢವಾಗಿದೆ. ನಿಜ ಜೀವನದಲ್ಲೂ ಪರಿಸರದ ಉಳಿವಿಗೆ ಹೋರಾಡಿದ ಕಾರಂತರು, ಕೈಗಾ ಅಣುವಿದ್ಯುತ್ ಸ್ಥಾವರದ ವಿರುದ್ಧ ಹೋರಾಟಕ್ಕೆ ನಾಯಕತ್ವ ವಹಿಸಿದ್ದು ಪ್ರಖ್ಯಾತವಾಗಿದೆ. ಮಕ್ಕಳಿಂದ, ವಯೋವೃದ್ಧರವರೆಗೆ ಸಾಹಿತ್ಯ ಕೃಷಿ ಮಾಡಿದ, ಚಿಂತಿಸಿದ ಕಾರಂತರು ಇಡೀ ದೇಶದ ದೊಡ್ಡ ನಿಧಿಯಾಗಿದ್ದರು. ಕರ್ನಾಟಕದ ಮೂಲೆ ಮೂಲೆ, ಭಾರತದ ಬಹುತೇಕ ಸ್ಥಳಗಳು, ವಿದೇಶಗಳ ಸಾಂಸ್ಕೃತಿಕ ಕೇಂದ್ರಗಳಿಗೆ ಸುತ್ತುತ್ತ, ತಮ್ಮ ಕೊನೆಗಾಲ ದವರೆಗೂ ಪ್ರವಾಸ ಮಾಡಿದ್ದರು.ಜ್ಞಾನಪೀಠಪದ್ಮಭೂಷಣಪಂಪ ಪ್ರಶಸ್ತಿನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ. ವಯಸ್ಸಿನ ದಣಿವು ಮರೆತು, ಜ್ಞಾನದಾರಿಯಲ್ಲಿ ಜನರನ್ನು ಕೊಂಡೊಯ್ದ ಪ್ರೀತಿಯ "ಕಾರಂತಜ್ಜ" ಆಗಿದ್ದರು. ವಿಶ್ವ ಪ್ರೇಮಿ ಹಾಗೂ ಮಹಾ ಮಾನವತಾವಾದಿ ಆಗಿದ್ದ ಕಾರಂತರು ಜ್ಞಾನ ಕ್ಷಿತಿಜವನ್ನು ಎಂಟು ದಿಕ್ಕಿಗೆ ಚಾಚಿದ ಅಕ್ಷರ ಪ್ರೇಮಿಯಾಗಿದ್ದರು.

No comments:

Post a Comment